old camera

ಕ್ಯಾಮರೆ (ಕ್ಯಾಮರಾ) ಎಂಬ ಪದದ ಮೂಲ ಗ್ರೀಕ್ ಭಾಷೆ. ಇದರ ಅರ್ಥ "ಕೋಣೆ" ಎಂದು.

ಕತ್ತಲು ಕೋಣೆಯೊಂದರಲ್ಲಿ ಸಣ್ಣ ರಂಧ್ರವಿದ್ದರೆ ಬೆಳಕಿನ ಕಿರಣಗಳು ಅದರ ಮೂಲಕ ಹಾದು, ಹೊರಗಿನ ದೃಶ್ಯಗಳನ್ನು ಎದುರುಗಿನ ಗೋಡೆಯ ಮೇಲೆ ಪ್ರತಿಬಿಂಬವನ್ನುಂಟು ಮಾಡುವವು ಎಂಬುದು ಬಹು ಹಿಂದೆಯೇ ಗೊತ್ತಾಯಿತು. ಛಾಯಾಗ್ರಾಹಕರು ಈಗಲೂ ಫಿಲ್ಮನ್ನು ಸಂಸ್ಕರಿಸುವ ಕೋಣೆಯನ್ನು "ಕತ್ತಲು ಕೋಣೆ" ಎಂದೇ ಕರೆಯುತ್ತಾರೆ.

ಕತ್ತಲು ಕೋಣೆಯೊಂದರಿಂದಲೇ ಛಾಯಾಚಿತ್ರಗಳನ್ನು ಹಿಡಿಯುವುದು ಸಾಧ್ಯ. ಇದರ ಗೋಡೆಯ ಮೇಲೆ ಬೀಳುವ ಪ್ರತಿಬಿಂಬ ಕೇವಲ ತಾತ್ಕಾಲಿಕವಾದುದಾಗಿರುತ್ತದೆ.

ಇಂಗ್ಲೆಂಡಿನ ಪ್ರಸಿದ್ಧ ಜಾಡಿ ಕಾರ್ಖಾನೆಯೊಂದರ ಮಾಲಿಕನ ಮಗನಾದ ಥಾಮಸ್ ವೆಡ್ಸ್‍ವುಡ್ ಎಂಬಾತನು ಛಾಯಾಚಿತ್ರಗಳನ್ನು ದೀರ್ಘಕಾಲ ಸೆರೆಹಿಡಿಯುವ ವಿಧಾನದ ಬಗ್ಗೆ ಆಸಕ್ತಿ ಹೊಂದಿದನು. ಕಳೆದ ಶತಮಾನದ ಆದಿಯಲ್ಲಿ ಆತನು ಸ್ವಲ್ಪ ಸಿಲ್ವರ್ ನೈಟ್ರೈಟನ್ನು ನೀರಿನಲ್ಲಿ ಕರಗಿಸಿ ಈ ದ್ರಾವಣವನ್ನು ಒಂದು ಕಾಗದದ ಚೂರಿನ ಮೇಲೆ ಸವರಿ ಅನಂತರ ಕೆಲವು ಎಲೆಗಳನ್ನು ಈ ಚೂರಿನ ಮೇಲಿರಿಸಿ ಬಿಸಿಲಿಗಿಟ್ಟನು. ಸ್ವಲ್ಪ ಹೊತ್ತಿನಲ್ಲಿಯೇ ಎಲೆಗಳಿದ್ದ ಭಾಗವನ್ನು ಬಿಟ್ಟು ಉಳಿದ ಭಾಗವೆಲ್ಲಾ ಕಪ್ಪಗಾಯಿತು. ಇದೂ ಒಂದು ತರಹ ಛಾಯಾಚಿತ್ರವೇ ಆಗಿತ್ತೆನ್ನಬಹುದು. ಆದರೆ, ಇದು ಕೇವಲ ನೆರಳು-ಬೆಳಕಿನ ಚಿತ್ರವಾಗಿತ್ತೇ ಹೊರತು ಪ್ರತಿಚಿತ್ರವಾಗಿರಲಿಲ್ಲ.

ಅನಂತರ ಸರ್ ಹುಫ್ರಿಡೆವಿ ಮತ್ತು ಸರ್ ಜಾನ್ ಹೆರ್ಷೆಲ್ ಅವರೂ ಸರಿಯಾದ ಪ್ರತಿಚಿತ್ರಗಳನ್ನು ತೆಗೆಯುವ ಬಗ್ಗೆ ಪ್ರಯೋಗ ನಡೆಸಿ, ವಿಫಲರಾದರು. ಕೆಂಪು ಬೆಳಕಿನಲ್ಲಿ ಮಾತ್ರ ಸ್ವಲ್ಪ ಹೆಚ್ಚು ಕಾಲವಿರುವ ಚಿತ್ರಗಳನ್ನು ಅವರು ತೆಗೆದರು. ಸಾಮಾನ್ಯ ಬೆಳಕಿನಲ್ಲೂ ನೋಡಬಹುದಾಗಿದ್ದ ಚಿತ್ರವನ್ನು ಅವರು ಇನ್ನೂ ತೆಗೆಯಬೇಕಾಗಿತ್ತು.
                                                   -ಸುಮಾ ಸಂಜೀವ